ಮೌನವೆನ್ನುವ
ವಿಷವ ಕುಡಿದು
ಮಾತುಗಳನೆಲ್ಲ ಮರೆತು
ಸುಮ್ಮನೆ
ಎಲ್ಲರಿಂದ ಎಲ್ಲದರಿಂದ
ದೂರ ಬಹುದೂರ ಸಾಗಿ
ಬಂದುಬಿಟ್ಟೆ….
ಮುಂದಿನ ದಾರಿ
ತೀರ್ಮಾನವಾಗಿರಲಿಲ್ಲ
ಏನೊಂದೂ ಹೊತ್ತು ತಂದಿಲ್ಲ
ಖಾಲಿ ಮನಸಿನಿಂದ
ಬಂದಿರುವೆ
ಬರಿಯ ಆನಂದವನ್ನೇ
ತುಂಬಿಕೊಳುತಿರುವೆ
ಅಗಾಧವಾದ
ಮರದ ಕೊಂಬೆಗಳನು
ನೋಡಿ …….
ಬಯಲೊಳಗೆ
ಬತ್ತಲಾಗಿ ನಿಂತು
ಬೇರುಗಳನು ನೆಲದೆದೆಗೆ
ಊರಿ
ಬಿಡಿಸಲಾರದ ಬಂಧ
ಬೆಸೆದುಕೊಂಡು
ಕೊನೆಗೊಮ್ಮೆ ಉಸಿರು ನಿಂತರೂ
ಮಣ್ಣೊಳಗೆ ಮಣ್ಣಾಗುವ
ಮಾಯೆಗೆ
ಪ್ರೀತಿಯೆನ್ನುವುದೋ
ಪರಿಸ್ಥಿತಿ ಯೆನುವುದೋ
ಮೂಕವಿಸ್ಮಿತನಾಗಿರುವೆ……
ಈಗ ನಾ
ಮೌನದಲಿರುವೆ
ಸುಮ್ಮನೆ ಪ್ರಕೃತಿಯ ಮಾತನು !!
ಆಲಿಸುತಿರುವೆ……